ಆಫಾ
ಇಂಗ್ಲೆಂಡಿನ ಮರ್ಸಿಯ ದೇಶವನ್ನು ಕ್ರಿ.ಶ. 757- 96 ರವರೆಗೆ ಆಳಿ, ಸಮಗ್ರ ಇಂಗ್ಲೆಂಡ್ ಒಂದೇ ರಾಜ್ಯವಾಗಲು ದಾರಿ ಮಾಡಿಕೊಟ್ಟ ಒಬ್ಬ ದೊರೆ. ಕೆಂಟ್, ಸಸೆಕ್ಸ್ ಮುಂತಾದ ನೆರೆ ರಾಜ್ಯಗಳು ತನ್ನ ಪ್ರಭಾವಕ್ಕೆ ಒಳಪಡುವಂತೆ ಮಾಡಿಕೊಂಡು, 774ರಲ್ಲಿ ಹೊರಡಿಸಿದ ಸನ್ನದಿನಂತೆ ರೆಕ್ಸ್ ಆಂಗ್ಲೋರಂ ಅಥವಾ ಇಂಗ್ಲಿಷರ ದೊರೆ ಎಂಬ ಬಿರುದು ಧರಿಸಿದ. ಪೂರ್ವ ಆಂಗ್ಲೀಯ ದೇಶವನ್ನು ವಶಪಡಿಸಿಕೊಂಡು ವೆಸೆಕ್ಸ್ ದೊರೆಯ ಪ್ರಾಬಲ್ಯವನ್ನು ಕುಗ್ಗಿಸಿದ. ಆ ದೊರೆಗೆ ಮತ್ತು ನಾರ್ದಂಬ್ರಿಯದ ದೊರೆಗೆ ತನ್ನ ಪುತ್ರಿಯರನ್ನು ಕೊಟ್ಟು ವಿವಾಹ ಮಾಡಿ ಅವರ ಮೈತ್ರಿಯನ್ನು ಗಳಿಸಿದ. ಫ್ರಾನ್ಸಿನ ದೊರೆ ಷಾರ್ಲ್‍ಮನ್‍ನೊಂದಿಗೆ ವಾಣಿಜ್ಯ ಒಪ್ಪಂದವನ್ನು ಮಾಡಿಕೊಂಡ. ಹೊರದೇಶಗಳೊಡನೆ ಇಂಗ್ಲೆಂಡ್ ಮಾಡಿಕೊಂಡ ವಾಣಿಜ್ಯ ಒಪ್ಪಂದಗಳಲ್ಲಿ ಇದೇ ಮೊದಲನೆಯದೆಂದು ತೋರುತ್ತದೆ. ವೇಲ್ಸಿಗೂ ಮರ್ಸಿಯಕ್ಕೂ ನಡುವೆ ಆಫಾಸ್ ಡೈಕ್ ಎಂದು ಹೆಸರು ಹೊಂದಿರುವ ದೊಡ್ಡ ಅಣೆಕಟ್ಟನ್ನು ನಿರ್ಮಿಸಿದ. ಅಂದವಾದ ಬೆಳ್ಳಿ ನಾಣ್ಯಗಳನ್ನು ಅಚ್ಚು ಹಾಕಿಸಿ ಚಲಾವಣೆಗೆ ತಂದ. ಆಲ್ಫ್ರೆಡ್ ಮಹಾಶಯನಿಗಿಂತ ಹಿಂದೆ ಆಳಿದ ರಾಜರಲ್ಲಿ ಅವನಷ್ಟು ಸಮರ್ಥನೂ ಪ್ರಭಾವಶಾಲಿಯೂ ಆದ ದೊರೆ ಬೇರೊಬ್ಬನಿಲ್ಲ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ